Latest News & Events

Teachers Day 2026

ಒಂದು ಪೀಳಿಗೆಗೆ ಪಾಠ ಹೇಳುವವರು ಶಿಕ್ಷಕರಲ್ಲ; ಒಂದು ಪೀಳಿಗೆಯ ಬದುಕಿನ ದಿಕ್ಕನ್ನೇ ರೂಪಿಸುವವರು. ಜ್ಞಾನಕ್ಕೆ ವಿವೇಕದ ಸ್ಪರ್ಶ ನೀಡಿ, ಪ್ರತಿಭೆಗೆ ರೆಕ್ಕೆ ಕಟ್ಟಿ, ವ್ಯಕ್ತಿತ್ವಕ್ಕೆ ಮೌಲ್ಯದ ರೂಪ ನೀಡುವ ಶಿಕ್ಷಕರು ಭವಿಷ್ಯದ ಭದ್ರ ರೂವಾರಿಗಳು ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಹಾಗೂ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ ಅಭಯಚಂದ್ರ ಜೈನ್ ಹೇಳಿದರು.

ಮೂಡುಬಿದಿರೆಯ ಎಕ್ಸಲೆಂಟ್‌ ವಿದ್ಯಾ ಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ದೇಶ ಕಂಡ ಶ್ರೇಷ್ಠ ಶಿಕ್ಷಕ, ತತ್ವಜ್ಞಾನಿ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜೀವನಾದರ್ಶಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ. ಕಾಲೇಜು ಉಜಿರೆಯ ನಿವೃತ್ತ ಎಂ.ಸಿ.ಜೆ. ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗ್ಡೆ , ಪುತ್ತೂರು ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹರೀಶ್ ಶಾಸ್ತ್ರಿ ,ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಿರಂಜನ್ ಎ., ಉಡುಪಿಯ ಶಾರದಾ ವಸತಿ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಹಾಗೂ ಬೆಳ್ತಂಗಡಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಅಧ್ಯಾಪಕಿ ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರು ಮಾತನಾಡಿ, ಶಿಕ್ಷಕರು ಜ್ಞಾನದೊಂದಿಗೆ ವಿದ್ಯಾರ್ಥಿಗಳಲ್ಲಿ ಮಾನವೀಯತೆ, ಶಿಸ್ತು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಸಮರ್ಪಣೆ ಮತ್ತು ವಿದ್ಯಾರ್ಥಿಗಳ ಪರಿಶ್ರಮ ಮಹತ್ತರ ಪಾತ್ರ ವಹಿಸಿದೆ ಎಂದರು. ಇದೇ ಸಂದರ್ಭದಲ್ಲಿ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ವಿಷಯವಾರು ಶೇ.100 ಫಲಿತಾಂಶ ಹಾಗೂ ನೂರಕ್ಕೆ ನೂರು ಅಂಕಗಳ ಸಾಧನೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ ಅಧ್ಯಾಪಕರನ್ನು ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುಷ್ಪರಾಜ್‌, ಸುನಾದ್ ರಾಜ್, ತೇಜಸ್ವಿ ಭಟ್, ಶಿವಪ್ರಸಾದ್ ಭಟ್, ಜಯಶೀಲ, ವಿಮಲಾ ಶೆಟ್ಟಿ ಉಪಸ್ಥಿತರಿದ್ದರು. ರಶ್ಮಿತಾ ಶೆಟ್ಟಿ ಹಾಗೂ ಚಶ್ಮಿತಾ ಎ. ಯಾದವ್ ನಿರೂಪಿಸಿದರು.